
ಬೆಳಗಾವಿ: ಸುಮಾರು ಎರಡೂವರೆ ದಶಕಗಳ ದೀರ್ಘಾವಧಿಯ ನಂತರ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದ ಮಹಾರಾಷ್ಟ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ.
ಬೆಳಗಾವಿ ಸೇರಿದಂತೆ ಕರ್ನಾಟಕದ 865 ಪಟ್ಟಣ ಹಾಗೂ ಹಳ್ಳಿಗಳು ತಮ್ಮ ರಾಜ್ಯಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಇದೇ ಜನವರಿ 21 ರಂದು ನಡೆಯಲಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ಸಮರ್ಥವಾಗಿ ವಾದ ಮಂಡಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಲಾಯಿತು.
ಈ ಸಭೆಯಲ್ಲಿ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಹಿಂಚಗೇರಿ, ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರ ವಾದ ಮಂಡಿಸುವ ವಕೀಲ ನಿಶಾಂತ್ ಪಾಟೀಲ್, ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಸದಸ್ಯ ಆರ್.ಬಿ. ಧರ್ಮೇಗೌಡ ಹಾಗೂ ಕಾನೂನು ಇಲಾಖೆಯ ಅಪರ ಕಾರ್ಯದರ್ಶಿ ಕೆ.ಎಲ್. ಅಶೋಕ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಮಹಾರಾಷ್ಟ್ರದ ಅರ್ಜಿಯನ್ನು ವಜಾಗೊಳಿಸುವ ನಿಟ್ಟಿನಲ್ಲಿ ಪ್ರಬಲ ಕಾನೂನು ಹೋರಾಟ ರೂಪಿಸಲು ರಾಜ್ಯದ ಕಾನೂನು ತಂಡ ಸಜ್ಜಾಗಿದೆ.



