CricketLatestNationalSportsState

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್? ಬೆಂಗಳೂರಿನ ಬದಲು ರಾಯ್‌ಪುರ ಅಥವಾ ಇಂದೋರ್‌ನಲ್ಲಿ ತವರು ಪಂದ್ಯ?

ಬೆಂಗಳೂರು: ಐಪಿಎಲ್ ಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬದಲು ಬೇರೆಡೆ ಆಡುವ ಸಾಧ್ಯತೆ ದಟ್ಟವಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಛತ್ತೀಸ್‌ಗಢದ ರಾಯ್‌ಪುರ ಅಥವಾ ಮಧ್ಯಪ್ರದೇಶದ ಇಂದೋರ್ ನಗರಗಳು ಆರ್‌ಸಿಬಿಯ ಹೊಸ ‘ಹೋಮ್ ಗ್ರೌಂಡ್’ ಆಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.

ಸ್ಥಳಾಂತರಕ್ಕೆ ಕಾರಣವೇನು? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಹಿಂದೆ ಸಂಭವಿಸಿದ ಕಾಲ್ತುಳಿತದಂತಹ ದುರಂತ ಮತ್ತು ನ್ಯಾ. ಮೈಕಲ್ ಡಿ ಕುನ್ಹಾ ಅವರ ವರದಿಯಲ್ಲಿ ಪ್ರಸ್ತಾಪಿಸಲಾದ ಸುರಕ್ಷತಾ ಲೋಪಗಳೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಕ್ರೀಡಾಂಗಣದಲ್ಲಿ ತುರ್ತು ನಿರ್ಗಮನ ದ್ವಾರಗಳು, ಅಂಬುಲೆನ್ಸ್ ಓಡಾಟಕ್ಕೆ ಸ್ಥಳಾವಕಾಶ, ಪಾರ್ಕಿಂಗ್ ವ್ಯವಸ್ಥೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಮಾರ್ಗದಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಎಸ್‌ಸಿಎ ಪ್ರಯತ್ನವೇನು? ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಬೆಂಗಳೂರಿನಲ್ಲೇ ಪಂದ್ಯ ಆಯೋಜಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಸಮಿತಿ ಸೂಚಿಸಿರುವ ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಲೋಪಗಳನ್ನು ಸರಿಪಡಿಸಲು ಕೆಎಸ್‌ಸಿಎ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಆದಾಗ್ಯೂ, ಆರ್‌ಸಿಬಿ ಫ್ರಾಂಚೈಸಿ ಈವರೆಗೂ ಕೆಎಸ್‌ಸಿಎಯನ್ನು ಅಧಿಕೃತವಾಗಿ ಸಂಪರ್ಕಿಸಿಲ್ಲದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪುಣೆಗೆ ರಾಜಸ್ಥಾನ್ ರಾಯಲ್ಸ್: ಮತ್ತೊಂದೆಡೆ, ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ, ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ತವರು ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಮೊದಲು ಆರ್‌ಸಿಬಿ ಪುಣೆಗೆ ಹೋಗಬಹುದು ಎಂದು ಹೇಳಲಾಗಿತ್ತಾದರೂ, ಈಗ ರಾಯ್‌ಪುರ ಅಥವಾ ಇಂದೋರ್ ಕಡೆಗೆ ಒಲವು ತೋರಿದೆ.

ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯ ಪಂದ್ಯಗಳನ್ನು ಚಿನ್ನಸ್ವಾಮಿಯಿಂದ ದೇವನಹಳ್ಳಿಯ ಬಿಸಿಸಿಐ ‘ಸೆಂಟರ್ ಆಫ್ ಎಕ್ಸಲೆನ್ಸ್’ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು ಎಂಬುದು ಗಮನಾರ್ಹ. ಮಾರ್ಚ್ 21ರಂದು ಐಪಿಎಲ್ ಆರಂಭವಾಗುವ ಸಾಧ್ಯತೆಯಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ವೇಳಾಪಟ್ಟಿ ಪ್ರಕಟವಾದಾಗ ಪಂದ್ಯದ ಸ್ಥಳದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial