BagalkotDistrictLatest

ಬಾರ್ ಬಂದ್ ಮಾಡುವಂತೆ ಮಹಿಳೆಯರ ತೀವ್ರ ಪ್ರತಿಭಟನೆ

ಬಾಗಲಕೋಟೆ: ಜಿಲ್ಲೆಯ ರಬಕವಿ–ಬನಹಟ್ಟಿ ತಾಲೂಕಿನ ಮದಬಾವಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಾರ್ ಬಂದ್ ಮಾಡಿಸುವಂತೆ ಆಗ್ರಹಿಸಿ ಮಹಿಳೆಯರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ಹಾಳಾಗುತ್ತಿದ್ದು, ಬಾರ್‌ನಿಂದಾಗಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ವೇಳೆ ಮಹಿಳೆಯರು ಮದ್ಯದ ಪಾಕೀಟುಗಳನ್ನು ಸುಟ್ಟು ಬಾರ್ ವಿರೋಧಿ ಘೋಷಣೆಗಳನ್ನು ಕೂಗಿದರು. ಗ್ರಾಮದಲ್ಲಿ ಇದುವರೆಗೆ ಶಾಂತಿ ನೆಲೆಸಿದ್ದು, ಬಾರ್ ಆರಂಭವಾದರೆ ಕುಟುಂಬಗಳ ನೆಮ್ಮದಿ ನಾಶವಾಗಲಿದೆ ಎಂದು ಅವರು ಆರೋಪಿಸಿದರು. ಮದ್ಯ ಸೇವನೆಯಿಂದ ಗೃಹ ಕಲಹಗಳು ಹೆಚ್ಚಾಗುವ ಆತಂಕವಿದ್ದು, ಗ್ರಾಮದಲ್ಲಿ ಬಾರ್ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಈ ಕುರಿತು ಪಿಡಿಓ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ, ಈ ಕೂಡಲೇ ಬಾರ್ ಬಂದ್ ಮಾಡುವಂತೆ ಮಹಿಳೆಯರು ಆಗ್ರಹಿಸಿದರು. ಮಹಾಲಿಂಗಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮದಬಾವಿ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ಅಥವಾ ಬಾರ್‌ಗೆ ಅನುಮತಿ ನೀಡಬಾರದು ಎಂದು ಅವರು ತಿಳಿಸಿದರು.ಬಾರ್ ಬಂದ್ ಮಾಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಹಿಳೆಯರು ಎಚ್ಚರಿಕೆ ನೀಡಿದರು. ಗ್ರಾಮಸ್ಥರ ಹಿತದೃಷ್ಟಿಯಿಂದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial