
ಹಾವೇರಿ: ಸೋಮವಾರ ಸಂಜೆ ಗುಡುಗು,ಸಿಡಿಲು ಸಹಿತ ಸುರಿದ ಮಳೆಗೆ ಜಿಲ್ಲೆಯ ಹಿರೇಕೆರೂರು – ರಟ್ಟಿಹಳ್ಳಿ ತಾಲೂಕಿನಾಧ್ಯಂತ ಇಬ್ಬರು ಮೃತ ಪಟ್ಟಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ವರದಿಯಾಗಿದೆ. ಜೊತೆಗೆ ಹಾನಿಯಾದ ಪ್ರದೇಶಕ್ಕೆ ಶಾಸಕ ಯು.ಬಿ.ಬಣಕಾರ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದ್ದಾರೆ.

ಪ್ರಮುಖವಾಗಿ ಸಿಡಿಲು ಬಡಿದು ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ರೈತ ನಾಗಪ್ಪ ಕಣಸೋಗಿ ಮೃತ ಪಟ್ಟಿದ್ದರೆ, ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ಸುನೀಲ ಕಾಳೇರ ಯುವಕ ಮೃತ ಪಟ್ಟಿದ್ದಾರೆ.

ರೈತ ನಾಗಪ್ಪ ಅವರು ಎತ್ತುಗಳನ್ನ ಮೆಯಿಸಲು ಹೋದಾಗ ಸಿಡಿಲು ಬಡಿದು ಸಾವುಗೊಂಡಿದ್ದರೆ, ಸುನೀಲ ಜಮೀನಿಗೆ ತೆರಳಿದ ವೇಳೆ ಸಿಡಿಲಿಗೆ ಬಲಿಯಾಗಿದ್ದಾರೆ.ವಿಷಯ ತಕ್ಷಣವೇ ಸ್ಥಳಕ್ಕೆ ತೆರಳಿದ ಶಾಸಕ ಯು.ಬಿ.ಬಣಕಾರ ಅವರು ಇಬ್ಬರ ಸಾವಿಗೆ ಕಂಬನಿ ಮೀಡಿದಿದ್ದಾರೆ.ಜೊತೆಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿ, ಇಬ್ಬರಿಗೂ ಸರಕಾರದಿಂದ ಸಿಗುವಂತ ಸವಲತ್ತುಗಳನ್ನು ಕೊಡಿಸುವ ಭರವಸೆ ನೀಡಿದ್ದಾರೆ.



