
ಮಹಾದೇವಪ್ಪಧಾರವಾಡ: ಇನಾಂ ವಿರಾಪೂರದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣ ಅತ್ಯಂತ ದುಃಖಕರ ಹಾಗೂ ಖಂಡನೀಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ತಿಳಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.ಡಿಸೆಂಬರ್ 21 ರಂದು ಯುವತಿಯ ಹತ್ಯೆ ನಡೆದಿದ್ದು, ಇದು ಸ್ಪಷ್ಟವಾದ ಕೊಲೆ ಪ್ರಕರಣವಾಗಿದೆ. ಪ್ರಾಯಕ್ಕೆ ಬಂದ ಯುವಕ-ಯುವತಿ ಪರಸ್ಪರ ಒಪ್ಪಿಗೆಯಿಂದ, ಕುಟುಂಬಗಳ ವಿರೋಧದ ನಡುವೆಯೂ ಮದುವೆಯಾಗಿದ್ದರು. ಇದರಿಂದ ಎರಡು ಕುಟುಂಬಗಳ ನಡುವೆ ವೈರತ್ವ ಬೆಳೆಯಿತು. 7-5-2025 ರಂದು ಮಿಸ್ಸಿಂಗ್ ದೂರು ಕೂಡ ದಾಖಲಾಗಿತ್ತು. ನಂತರ ದೇವಸ್ಥಾನದಲ್ಲಿ ರಿಜಿಸ್ಟರ್ ಮೂಲಕ ಮದುವೆಯಾಗಿದ್ದು, ನಾಲ್ಕು ತಿಂಗಳು ಹೊರಗಡೆ ವಾಸವಾಗಿದ್ದರು. ಹತ್ಯೆಗೊಳಗಾದ ಯುವತಿ ಗರ್ಭಿಣಿಯಾಗಿದ್ದಳು ಎಂದು ಸಚಿವರು ತಿಳಿಸಿದರು.ಈ ಪ್ರಕರಣ ಜಾತಿ ಆಧಾರಿತ ಮರ್ಯಾದಾ ಹತ್ಯೆಯಾಗಿದ್ದು, ಕೊಲೆ ಪ್ರಕರಣವಾಗಿ ದಾಖಲಾಗಿದೆ. ಸುಪ್ರೀಂಕೋರ್ಟ್ ತೀರ್ಪುಗಳ ಪ್ರಕಾರ 60 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬೇಕು. ರಾಜ್ಯದಲ್ಲಿ 14 ಕಡೆ ಸ್ಪೆಷಲ್ ಕೋರ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದರು.ಸಂಘಟನೆಗಳು ಹಾಗೂ ಸಾರ್ವಜನಿಕರು ಈ ಘಟನೆಯಿಂದ ನೊಂದಿದ್ದಾರೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬದ ಬಗ್ಗೆ ದೂರುಗಳು ಬಂದಿದ್ದು, ಇಲಾಖೆಯ ಕಮಿಷನರ್ ಮೂಲಕ ವಿಚಾರಣೆ ನಡೆಸಿ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಹತ್ಯೆಗೊಳಗಾದ ಯುವಕನ ಕುಟುಂಬಕ್ಕೆ ಇಲಾಖೆಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆ ಗ್ರಾಮದಲ್ಲಿ ಇರುವ 9 ದಲಿತ ಕುಟುಂಬಗಳಿಗೆ ರಕ್ಷಣೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರ ಅವರ ಪರ ನಿಂತಿದ್ದು, ಒಬ್ಬರೂ ತಪ್ಪಿಸಿಕೊಳ್ಳಬಾರದು ಎಂದು ಸಚಿವರು ಹೇಳಿದರು.ಫಾಸ್ಟ್‌ಟ್ರ್ಯಾಕ್ ಕೋರ್ಟ್ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು. ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಮರ್ಯಾದಾ ಹತ್ಯೆ ಪ್ರಕರಣದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅಗತ್ಯವಿದ್ದರೆ ಮುಂದಿನ ಅಧಿವೇಶನದಲ್ಲಿ ಮರ್ಯಾದಾ ಹತ್ಯೆ ವಿರೋಧಿ ಕಾನೂನು ತರಲು ಪರಿಶೀಲನೆ ನಡೆಸಲಾಗುವುದು ಎಂದರು.ಈ ಘಟನೆ ನಮ್ಮೆಲ್ಲರಿಗೂ ನಾಚಿಕೆ ತಂದಿದೆ. ನಾಗರಿಕ ಸಮಾಜ ಈ ಮಟ್ಟಕ್ಕೆ ಹೋಗಿರುವುದು ಅತ್ಯಂತ ಖಂಡನೀಯ ಎಂದು ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದರು.
ವರದಿ. ಡಾ. ರವಿ ಬಿ ಕಾಂಬಳೆ



