
ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಮಸೀದಿಗೆ ಮಂಗಳಾರತಿ
ರಾಮದುರ್ಗ (ಬೆಳಗಾವಿ ಜಿಲ್ಲೆ):
ನಗರದಲ್ಲಿ ಕೋಮು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆ ನಡೆಯಿತು. ಅಯ್ಯಪ್ಪ ಸ್ವಾಮಿ ಪಡಿಪೂಜಾ ಮೆರವಣಿಗೆಯ ವೇಳೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ನಗರದ ಜಾಮೀಯಾ ಮಸೀದಿಗೆ ತೆರಳಿ ಮಂಗಳಾರತಿ ಮಾಡುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದರು.

ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ನಾಗರಿಕರು ಅಯ್ಯಪ್ಪ ಮಾಲಾಧಾರಿಗಳಿಗೆ ಮಾಲೆ ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಎರಡೂ ಸಮುದಾಯದವರು ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಸಂಕೇತವಾಗಿ ಒಂದಾಗಿ ಭಾಗವಹಿಸಿದ್ದು, ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಾಣವಾಯಿತು.

ಈ ಕುರಿತು ಮಾತನಾಡಿದ ಅಯ್ಯಪ್ಪ ಮಾಲಾಧಾರಿಗಳು, “ಶಬರೀಮಲೆಗೆ ತೆರಳುವಾಗ ವಾವರ ಸ್ವಾಮಿ ಮಸೀದಿಗೆ ಹೋಗುವ ಸಂಪ್ರದಾಯ ಇದೆ. ಅದೇ ಸಂಪ್ರದಾಯವನ್ನು ಇಲ್ಲಿ ಪಾಲಿಸಿ ಕೋಮು ಸೌಹಾರ್ದತೆಯ ಸಂದೇಶ ನೀಡಿದ್ದೇವೆ” ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಎರಡೂ ಕೋಮಿನ ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಸಾಕ್ಷಿಯಾಗಿದ್ದು, ಇಂತಹ ಘಟನೆಗಳು ಸಮಾಜಕ್ಕೆ ಶಾಂತಿ ಮತ್ತು ಸಹೋದರತ್ವದ ಪಾಠ ಕಲಿಸುತ್ತವೆ ಎಂದು ನಾಗರಿಕರು ಅಭಿಪ್ರಾಯಪಟ್ಟರು.
ವರದಿ:
ಡಾ. ರವಿ ಬಿ. ಕಾಂಬಳೆ
RK22 NEWS KANNADA
ಮುಖ್ಯ ಸಂಪಾದಕರು
📞 9108464318



